ಹುಚ್ಚು ಮನಸ್ಸು ಹುಡುಕುತಿದೆ
ವಿವಿಧ ನೆಲೆ, ಕಲೆ, ಆನಂದ, ಸ್ಪೂರ್ತಿಯ ಸೆಲೆ
ಹತ್ತು ಹಲವು ಆಸೆಗಳ ಬಲೆಯಲ್ಲಿ ಸಿಕ್ಕು
ಸೋತು ಸೊರಗಿ ಮೆತ್ತಗಾಗಿ
ಮರುಗುತಿದೆ ಏನಿದು ವಿಧಿ ಲೀಲೆ
ಅಯ್ಯೋ ಪಾಪಚ್ಚಿ ಮನಸ್ಸು! ಅದಕ್ಕೇನು ತಿಳಿದಿದೆ?
ಅದರ ಹಿಂದೆ ಒಂದು ಭೂತ ಬುದ್ಧಿ
ಭವಿಷ್ಯದ ಭ್ರಮೆಯ ಆಟವಾಡುತಿದೆ
ಆಸೆಯ ಆನಂದವೆಂಬ ಮರೀಚಿಕೆಯ ಬೆನ್ನು ಹತ್ತಿಸಿದೆ
ತನ್ನನ್ನು ತಾನರಿಯದೆ ಅಹಂಕಾರದಲಿ ಮುಳುಗಿದೆ
ಪಾಪದ ಮನಸ್ಸುನು ದಾರಿತಪ್ಪಿಸುತ್ತಾ ತಾನು ತನ್ನ ನೆಲೆಯ ಮರೆತಿದೆ
ಬುದ್ದಿಯ ಅಹಂಕಾರವ ನೋಡುತ್ತಾ
ಬ್ರಹ್ಮವ ತಿಳಿದಿರುವ ಒಳಗೊಬ್ಬ ಕುಳಿತಿರುವ
ಸೋತು ಸೊರಗಿರುವ ಮನಸ್ಸಿಗೆ ಸ್ಪೂರ್ತಿಯ
ಗುಪ್ತಗಾಮಿನಿಯ ಹರಿಸುತ್ತಿರುವ
ಏಳು, ಎದ್ದೇಳು ನನ್ನಡೆಗೆ ಮುಖಮಾಡು
ಬುದ್ದನಂತೆ ಬದ್ಧನಾಗು ಎನುತಿರುವ
ಆನಂದದ ಅನಂತತೆಯ ಭವ್ಯ ಉಡುಗೊರೆಯೊಂದಿಗೆ
ಕಾಯುತಿರುವ, ಕಾಯುತಿರುವ, ಕಾಯುತಿರುವ ....